Search This Blog

Wednesday, May 19, 2010

ಕರುಣಾ ಕಾಮಧೇನು

        'ಕನ್ನಡ' ಎಂಬ ಬತ್ತದ ಪದ ಭಂಡಾರವುಳ್ಳ ಸಕ್ರಿಯೆ ಭಾಷೆಯು, ನನ್ನ ಮಾತೃಭಾಷೆ ಎಂದು ಹೊಗಳಿ ಹಾಡಲು ಬಾರದಿದ್ದರೂ, ಅಲ್ಪದರಲ್ಲಾದರೂ ತೃಪ್ತನಾಗಬೇಕಾದರೆ ಒಂದಿಷ್ಟು ಮಾತಿನಲ್ಲಿ ಹೇಳಬಹುದು.
        'ಕಸ್ತೂರಿ' ಎಂದು ಕರೆಯೆಲ್ಪಡುವ ಈ 'ಕಾಮಧೇನು'ವಿಗೆ ಕರುನಾಡಿನವರಾದ ನಾವೆಲ್ಲರೂ  ಕೈ ಮುಗಿದು ನಮಿಸಲೇಬೇಕು. ಇನ್ನು ಈ ಭಾಷೆಗೆ ವಿವಿಧ ರೂಪ ಕೊಟ್ಟು ತನ್ನ ಮುದ್ದು ಕಂದನಂತೆ ಬೆಳೆಸುತ ಬಂದಿರುವ ಈ ಜನನಿ, ಪುಣ್ಯ ಭೂಮಿಗೆ 'ಕರ್ನಾಟಕ'ವೆಂದು ನಾಮಾಲಂಕರಿಸಲಾಗಿದೆ. ಹೀಗಿರುವಾಗ, ನಮ್ಮ ಮಣ್ಣಿನ ಸೊಗಡಿನ ಬಗ್ಗೆ ಹೇಳಿದಷ್ಟೂ ಈ ಜನ್ಮ ಪಾವನವಾಗುದಲ್ಲದೆ, ಈ ನಾಡಿನ ಕೀರ್ತಿ ಇನ್ನೂ ನಾಜೂಕಾಗಿ ಬಿಗಿದು ಮರವನಪ್ಪುವ ಮಲ್ಲಿಗೆ ಬಳ್ಳಿಯಂತೆ ಪರಿಮಳವ ಎಲ್ಲೆಡೆ ಚೆಲ್ಲುತ ಹಬ್ಬುವುದು.
        'ಕಲ್ಪತರು' ಎಂದೇ ಮನೆ ಮಾತಾಗಿರುವ ಈ ಮನೆ ಮನೆಯ ಮನದ ಮಾತಿನ ಕುರಿತು ಮಾತಿನಲಿ ಹೇಳುವುದರೊಡನೆ ತುಸು ನನ್ನ ತೊದಲ ಕವಿ ನುಡಿಯ ಕಾಣಿಕೆ ನೀಡಬೇಕೆಂಬ ಆಸೆಯಾಗಿ,ನಿಮ್ಮ ನಯನಗಳ ನೇರ ದೃಷ್ಟಿಗೆ ತಾಕುವಂತೆ ತೋರ ಪಡಿಸುತ್ತಿದ್ದೇನೆ!
                      "ಕನ್ನಡ ಕಾಮಧೇನು, ಕರ್ನಾಟಕ ಕಲ್ಪವೃಕ್ಷ"   


ಈ ಮಣ್ಣಿನ ಸಿಹಿಯಾಸೆಗೆ
              ರೈತ ನೆಟ್ಟ ಸಸಿ ಚಿಗುರೊಡೆದಿದೆ
ಈ ಹೆಣ್ಣಿನ ಸವಿ ಮಾತಿಗೆ
              ಶಕುನದ ಹಕ್ಕಿಗಳು ಶುಭ ಕೋರಿವೆ

ಕನಸಿನ ಕಂಗಳಲಿ
           ನಾಳೆಯ ನವ ಯುವಕರು ನುಡಿ ಬರೆಯುವ
                        ಮನಮೋಹಕ ನೋಟ ಕಂಡಿಹೆಯೇನು?
ತನುವ ಮಂದಿರದಲಿ
          ಸ್ನೇಹದ ಘಂಟಾಘೋಷ ಮೊಳಗಿಸುವ ಮನವ
                       ತನುಜಾತರಿಗೆ ನೀಡಿಹೆಯೇನು?

'ಶರಣು'ಯೆಂದು ಬಂದವರಿಗೆ
                 ಶ್ರೀರಕ್ಷಾ ಕವಚ ತೊಡಿಸುವ
                             ಪಣ ತೊಟ್ಟಿಹೆಯೇನು?
'ದೇಹಿ'ಯೆಂದು ಬಂದವರಿಗೆ
                 ದಯಪಾಲಿಸುವ 'ಕರುಣಾ ಕಾಮಧೇನು'
                             ಈ ನಮ್ಮ ಕರ್ನಾಟಕ ನೀನಲ್ಲದೆ ಬೇರೆಯೇನು?

ನಿಮ್ಮ
     ಡಿ.ಗು.ರಾವ್ 

No comments:

Post a Comment