Search This Blog

Friday, July 22, 2011

ಜೀವಿ



ಮುದ್ದು ಮುದ್ದಾಗಿ ಮಾತನಾಡುವ ಗಿಣಿಯಾಗಿದ್ದೆ ನಾ
ನೀ ಹೀಗೇಕೆ ನನ್ನ ಪ್ರೇಮ ಪಂಜರದೊಳು ಬಂಧಿಸಿ ಮೂಕನಾಗಿಸಿದೆ
ಸದಾ ನಲಿಯುತ ಜಿಗಿದಾಡುವ ಜಿಂಕೆಯಾಗಿದ್ದೆ ನಾ
ನೀ ಹೀಗೇಕೆ ನನ್ನ ಕಣ್ಣಿನಲೇ ಬೇಟೆಯಾಡಿ ಕೊಂದೆ

ಕಿಡಿಗೇಡಿ ಕುಚೇಷ್ಟಗಳ ಕಡಲಿನಲಿ ಮುಳುಗಿದ್ದ ಕಪಿಯಾಗಿದ್ದೆ ನಾ
ನೀ ಹೀಗೇಕೆ ನನ್ನ ಮನ ತಿದ್ದಿಸಿ ಮಾನವನಾಗಿಸಿದೆ
ಸದಾ ಕುತಂತ್ರಗಳ ಬಲೆ ಹೆಣೆವ ಚಾಣಾಕ್ಷ ನರಿಯಾಗಿದ್ದೆ ನಾ
ನೀ ಹೀಗೇಕೆ ನನ್ನ ಬುದ್ಧಿಗೆ ಮಂಕು ಕವಿಸಿದೆ

ಹೇಳದೆ ಕೇಳದೆ ಕಂಡಲ್ಲಿ ಹರಿದಾಡುವ ಹಾವಾಗಿದ್ದೆ ನಾ
ನೀ ಹೀಗೇಕೆ ನನ್ನ ಹೊರ ಬಿಡದೆ ಹೃದಯ ಬುಟ್ಟಿಯಲಿ ಬಚ್ಚಿಟ್ಟೆ
ಮಾತಿಗೆ ಮುನ್ನವೇ ಬಂದೆರಗುವ ದಿಟ್ಟ ಹುಲಿಯಂತಿದ್ದೆ ನಾ
ನೀ ಹೀಗೇಕೆ ನನ್ನ ಸಿಹಿ ಭಾವದ ಬಲೆಯಲಿ ಬೀಳಿಸಿದೆ

ಜಗದ ಜಂಭದಂಬಾರಿಯ ಹೊತ್ತ ಮದಗಜದಂತಿದ್ದೆ ನಾ
ನೀ ಹೀಗೇಕೆ ನನ್ನ ಹೃದಯದರಸಿಯಾಗಿ ಮೆರೆದು ಮದವಡಗಿಸಿದೆ
ಕಳ್ಳ ಹೆಜ್ಜೆಯನಿಟ್ಟು ಮೆಲ್ಲ ಕದ್ದು ನೋಡುವ ಬೆಕ್ಕಿನಂತಿದ್ದೆ ನಾ 
ನೀ ಹೀಗೇಕೆ ನನ್ನ ಕೊರಳಿಗೆ ಕಾಣದಂತೆ ಗಂಟೆ ಕಟ್ಟಿದೆ


- ಡಿ.ಗು.ರಾವ್



Thursday, July 21, 2011

ಚೆಲುವು


ಆಕೆ ಚೆನ್ನ 
ಈಕೆ ಇನ್ನೂ ಚೆನ್ನ
ಆಕೆ ಈಕೆಗಿಂತ ನನ್ನಾಕೆ ನನಗೆ ಬಲು ಚೆನ್ನ!

ಎಲ್ಲಾ ಹೆಣ್ಣಿನ ದೇಹಕೂ ನಿನ್ನ ಮೊಗವೇ ಏಕಿದೆ?
ಯೌವ್ವನ ಮಾಡಿದ ಮನದ ಗಾಯಕೆ ನಿನ್ನೊಲುಮೆಯ ಔಷಧಿ ಬೇಕಿದೆ

ಸೌಂದರ್ಯದ ಕಡಲಿನಲಿ ದೊರೆತ ಹೊಳೆವ ಮುತ್ತೊಂದು ನೀನು
ಈ ಕಣ್ಣಿನಲಿ ಬಂದು ಸೇರು ಬೇಡೆನು ಮತ್ತೊಂದು ನಾನು

ನಗುತ ಅರಳಿರುವ ಸುಮದಲ್ಲೂ ತುಂಬಿದೆ ನಿನ್ನದೇ ಪರಿಮಳ
ಹುಣ್ಣಿಮೆಯ ಚಂದಿರೆಯೆ ನಿನಗೆ ನನ್ನೆದೆಯೇ ಬಾಂದಳ

ಅರಿಯದೆ ಕವಿಯಾದೆ ಇಂದು ನಿನ್ನ ಸೆಳೆವ ಕಣ್ಣ ಕಂಡು
ಧನ್ಯನಾದೆ ಇಂದು ನಿನ್ನೊಲವ ಸುಧೆಯನುಂಡು
- ಡಿ. ಗು. ರಾವ್.