Search This Blog

Wednesday, July 7, 2010

ಅರಮನೆ

ನಿನ್ನ ಮನೆಯ ಚಾವಡಿಯಿಂದ
       ನನ್ನ ಕೆಳೆಗೆ ನೂಕಿ ಬಿಡು
ಮರುಭೂಮಿಯಲಿ ಬಿತ್ತಿದ ಮೋಡವ
       ನೀನೆ ಹಿಂದಕೆ ಕಳಿಸಿ ಬಿಡು
ಓ ದೇವರೇsss, ದಯಮಾಡಿ ಆ ಮರೆವ ಕೊಡು...


ಮುಂಬೆಳಗಿನಲಿ ಕಂಡ ಸ್ವಪ್ನವ
       ಕಣ್ಣಿಗೆ ಕಾಣದಂತೆ ಮುಚ್ಚಿ ಬಿಡು
ಎದೆಯ ಕೊರಗು ಹೊರಗ ಬಾರದಂತೆ
       ಬಾಯಿಗೆ ಬೀಗ ಹಾಕಿ ಬಿಡು
ಬಾಳಿನ ಪಯಣದ ನಡುದಾರಿಯಲಿ
       ಸುಮ್ಮನೆ ಹೇಳದೆ ಹಾಗೆ ಹೋಗಿ ಬಿಡು
ಪ್ರೇಮದ ಶಾಲೆಯ ಗುರುತಿನ ಚೀಟಿಯ
       ತಾರದೆ ಹೋದಕೆ ಹೊರ ಹಾಕಿ ಬಿಡು


ಚಪ್ಪಾಳೆಗೆ ಕೈ ಸೇರಿಸೋ ಮುನ್ನ
       ಚಿಟಿಕೆ ಹೊಡೆದು ಕೈ ತೊಳೆದು ಬಿಡು
ಅಂದದ ಅರಗಿನ ಅರಮನೆಯಲ್ಲಿ
       ದೀಪವ ಬೆಳಗಿಸಿ ಸರಿದು ಬಿಡು, ದೂರ ಸರಿದು ಬಿಡು...


ವಿ.ಸೂ.  ಮೂಲ ಆಧಾರ: ಯೋಗರಾಜ್ ಭಟ್, ಗುರುಕಿರಣ್ , "ನನ್ನ ಎದೆಯಲಿ...", ಅರಮನೆ ಚಿತ್ರ.

Wednesday, May 19, 2010

ಕರುಣಾ ಕಾಮಧೇನು

        'ಕನ್ನಡ' ಎಂಬ ಬತ್ತದ ಪದ ಭಂಡಾರವುಳ್ಳ ಸಕ್ರಿಯೆ ಭಾಷೆಯು, ನನ್ನ ಮಾತೃಭಾಷೆ ಎಂದು ಹೊಗಳಿ ಹಾಡಲು ಬಾರದಿದ್ದರೂ, ಅಲ್ಪದರಲ್ಲಾದರೂ ತೃಪ್ತನಾಗಬೇಕಾದರೆ ಒಂದಿಷ್ಟು ಮಾತಿನಲ್ಲಿ ಹೇಳಬಹುದು.
        'ಕಸ್ತೂರಿ' ಎಂದು ಕರೆಯೆಲ್ಪಡುವ ಈ 'ಕಾಮಧೇನು'ವಿಗೆ ಕರುನಾಡಿನವರಾದ ನಾವೆಲ್ಲರೂ  ಕೈ ಮುಗಿದು ನಮಿಸಲೇಬೇಕು. ಇನ್ನು ಈ ಭಾಷೆಗೆ ವಿವಿಧ ರೂಪ ಕೊಟ್ಟು ತನ್ನ ಮುದ್ದು ಕಂದನಂತೆ ಬೆಳೆಸುತ ಬಂದಿರುವ ಈ ಜನನಿ, ಪುಣ್ಯ ಭೂಮಿಗೆ 'ಕರ್ನಾಟಕ'ವೆಂದು ನಾಮಾಲಂಕರಿಸಲಾಗಿದೆ. ಹೀಗಿರುವಾಗ, ನಮ್ಮ ಮಣ್ಣಿನ ಸೊಗಡಿನ ಬಗ್ಗೆ ಹೇಳಿದಷ್ಟೂ ಈ ಜನ್ಮ ಪಾವನವಾಗುದಲ್ಲದೆ, ಈ ನಾಡಿನ ಕೀರ್ತಿ ಇನ್ನೂ ನಾಜೂಕಾಗಿ ಬಿಗಿದು ಮರವನಪ್ಪುವ ಮಲ್ಲಿಗೆ ಬಳ್ಳಿಯಂತೆ ಪರಿಮಳವ ಎಲ್ಲೆಡೆ ಚೆಲ್ಲುತ ಹಬ್ಬುವುದು.
        'ಕಲ್ಪತರು' ಎಂದೇ ಮನೆ ಮಾತಾಗಿರುವ ಈ ಮನೆ ಮನೆಯ ಮನದ ಮಾತಿನ ಕುರಿತು ಮಾತಿನಲಿ ಹೇಳುವುದರೊಡನೆ ತುಸು ನನ್ನ ತೊದಲ ಕವಿ ನುಡಿಯ ಕಾಣಿಕೆ ನೀಡಬೇಕೆಂಬ ಆಸೆಯಾಗಿ,ನಿಮ್ಮ ನಯನಗಳ ನೇರ ದೃಷ್ಟಿಗೆ ತಾಕುವಂತೆ ತೋರ ಪಡಿಸುತ್ತಿದ್ದೇನೆ!
                      "ಕನ್ನಡ ಕಾಮಧೇನು, ಕರ್ನಾಟಕ ಕಲ್ಪವೃಕ್ಷ"   


ಈ ಮಣ್ಣಿನ ಸಿಹಿಯಾಸೆಗೆ
              ರೈತ ನೆಟ್ಟ ಸಸಿ ಚಿಗುರೊಡೆದಿದೆ
ಈ ಹೆಣ್ಣಿನ ಸವಿ ಮಾತಿಗೆ
              ಶಕುನದ ಹಕ್ಕಿಗಳು ಶುಭ ಕೋರಿವೆ

ಕನಸಿನ ಕಂಗಳಲಿ
           ನಾಳೆಯ ನವ ಯುವಕರು ನುಡಿ ಬರೆಯುವ
                        ಮನಮೋಹಕ ನೋಟ ಕಂಡಿಹೆಯೇನು?
ತನುವ ಮಂದಿರದಲಿ
          ಸ್ನೇಹದ ಘಂಟಾಘೋಷ ಮೊಳಗಿಸುವ ಮನವ
                       ತನುಜಾತರಿಗೆ ನೀಡಿಹೆಯೇನು?

'ಶರಣು'ಯೆಂದು ಬಂದವರಿಗೆ
                 ಶ್ರೀರಕ್ಷಾ ಕವಚ ತೊಡಿಸುವ
                             ಪಣ ತೊಟ್ಟಿಹೆಯೇನು?
'ದೇಹಿ'ಯೆಂದು ಬಂದವರಿಗೆ
                 ದಯಪಾಲಿಸುವ 'ಕರುಣಾ ಕಾಮಧೇನು'
                             ಈ ನಮ್ಮ ಕರ್ನಾಟಕ ನೀನಲ್ಲದೆ ಬೇರೆಯೇನು?

ನಿಮ್ಮ
     ಡಿ.ಗು.ರಾವ್ 

Tuesday, May 18, 2010

ಪ್ರಾರ್ಥನೆ

       'ಪ್ರೀತಿ'ಯ ಬಗ್ಗೆ ಏನೇ ಹೇಳ ಹೊರಟರೂ ಅದು ಹಳೆಯದೆನಿಸುವಷ್ಟು ವರ್ಣ ರಂಜಿತ ವ್ಯಾಖ್ಯಾನಗಳು, ವಿವರಣೆಗಳು ಮತ್ತು ವರ್ಣನೆಗಳು ಸಿಗುತ್ತವೆ! ಹೀಗಿರುವಾಗ ಹೇಳಲು ಹೊಸದಾದು ಏನೂ ಇಲ್ಲವೆಂದು, ಬರವಣಿಗೆಗೆ ಬರ ಬರಬಹುದೆಂದು ಒಂದು ಕ್ಷಣ ಎನಿಸಿದರೂ ಮರುಘಳಿಗೆ 'ಮನ'ವೆಂಬ ಮಾಯಾಜಾಲದ ಯಾವುದೋ ಮೂಲೆಯಿಂದ "ಒಲವು ಕವಿಗಳಿಗೆ ಕಲ್ಪವಾಗಿ, ಪ್ರೇಮಿಗಳಿಗೆ ಪ್ರೇರಣೆಯಾಗಿ, ಶಿಲ್ಪಿಗಳಿಗೆ ಶಿಲೆಯಾಗಿ ಒಟ್ಟಾರೆ ಅಕ್ಷಯವಾಗಿ ನಿತ್ಯ ನಿರಂತರ ನಿರ್ಮಲವಾದುದು" ಎಂಬ ಮಧುರಭಾವ ಸದಾ ಬುದ್ಧಿಯ ಕಿವಿಯಲ್ಲಿ ಗುನುಗುತ್ತಿರುತ್ತದೆ!
       ಆ ನಿಟ್ಟಿನಲ್ಲಿ ನನ್ನ ಈ ಮುಂದಿನ ಸಾಲುಗಳು ಯಾವ ಕಥಾವಸ್ತುವನ್ನಾಧರಿಸಿರುತ್ತದೆ ಎಂಬುದನ್ನು ಜಗಜ್ಜಾಹೀರುಗೊಳಿಸಿ ನಿಮ್ಮ ಮುಂದೆ ಅಥವಾ ಎದುರಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಅಂದಹಾಗೆ ಈ ಸಾಲುಗಳು ಸಹ ಹೊಸತಿನ ಮುಖವಾಡ ಧರಿಸಿ, ಅದೇ ಪ್ರೇಮ ಪುರಾಣದ ಕಲಸು ಮೇಲೋಗರವಾಗಿದೆ!

                                  ಪ್ರಾರ್ಥನೆ 

ಅನುರಾಗಕೆ ಅನುವು ಕೊಟ್ಟರೆ
                   ಮನದಲಿ ನಾ ಮನೆಯ ಮಾಡುವೆ
ಕೋಗಿಲೆಯೇ ನಿನ್ನ ಇಂಪಾದ ದನಿ ಕೊಟ್ಟರೆ 
                   ಸವಿ ಹಾಡಿನಲೇ ನಿನ್ನ ಮಾತನಾಡಿಸುವೆ

ಹೆಸರಿರದ ಹೊಸ ಬಂಧವೊಂದು 
                  ಎದೆಯಲಿ ಹಸಿರಾಗಿ ಹಬ್ಬಿದೆ
ಹೆಸರಿನಿಂದ ನಿನ್ನ ಜಪ ಮಾತ್ರಕೆ 
                  ಆನಂದದಲಿ ನವಿರಾಗಿ ನನ್ನೆದೆ ಉಬ್ಬಿದೆ

ಪ್ರೇಮಪೂಜೆಗೆ ನೀ ಒಳ ಹೋದಾಗ
                 ನಾನಾಗಿರುವೆ ಬಾಗಿಲ ಮುಂದಿನ ತಿರುಕ!
ಈ ದಯನೀಯ ಸ್ಥಿತಿಯ ಕಂಡು
                 ನೀ ಒಮ್ಮೆ ಪಟ್ಟರೆ ಸಾಕು ಮರುಕ

ಈ ಆಳ ಒಲವ ಸಾಗರವ 
                ನೀ ಹಿಡಿಮುಷ್ಟಿಯಲಿ ತುಂಬಿಟ್ಟ ಬಗೆ ತಿಳಿಸು
ದುರುಳ ನೆನಪಿನ ಆಳ ಕಹಿಯಲಿ ತೋರಿ ಈ ಮುದ್ದು ಮುಖವ
                ದಯಮಾಡಿ ಈ ಬಡ ಉಸಿರ ಉಳಿಸು
ನಿಮ್ಮ 
    ಡಿ.ಗು.ರಾವ್ 





Wednesday, May 12, 2010

ಮದುವೆ

ಮನದ ಮೂಲೆಯಲಿ    
          ಬಚ್ಚಿಟ್ಟ ಒಲವ ಆಭರಣವ ತೊಡಿಸುವ ಸಂಬಂಧ
ಬಾಳಿನ ಪ್ರತಿ ಹೆಜ್ಜೆಯಲಿ
          ಸಂಗಾತಿಯು ಸಪ್ತಪದಿಯಿಡುವ ಕಂಕಣ ತೊಡಿಸುವ ಅನುಜನ್ಮದ ಅನುಬಂಧ
ಸರಳ ಸಂಪ್ರದಾಯಗಳು 
         ಸರಾಗದಲಿ ಸಂಚರಿಸುವ ನವ ಸಂಭ್ರಮದ ತೀಡಿದ ಶ್ರೀಗಂಧ
ಮನಗಳೆರಡರ ಸಶೇಷ ಬೆಸುಗೆಯ
         ಜಾಗತಿಕ ಅಧಿಕೃತ ಸರಳ ಒಪ್ಪಂದ....
        

Saturday, May 8, 2010

ಮಾತೃವಿಗೆ ಮನದ ಮಾತು

ನಮಸ್ತೆ ಬ್ಲಾಗ್ಗೆ,
ಸುದಿನವಾದ ಇಂದು ಅಂದರೆ ಮೇ ೯ರಂದು ಒಂದು ಪುಟ್ಟ ಸಂದೇಶ ಬರೆಯುವ ಮನಸಾಗಿದೆ. ಮನುಕುಲದ ಮನವೇ ಕರಗಿ ನೀರಾಗಿ ಮಾತೃವಿಗೆ ಆನಂದಭಾಷ್ಪದ ನಮನ ಸಲ್ಲಿಸುವ ಅಮೃತಮುಹೂರ್ಥ ಬಹುಷಃ ಇನ್ದೊಂದೇ ಸಿಗುವುದು!
          ಎಲ್ಲಾದಕ್ಕೂ ಒಂದೊಂದು ದಿನವಿರುವಂತೆ, ಮಾತೆಯರ ದಿನಾಚರಣೆ ಇರುವುದು ಆಚರಿಸುವುದಕ್ಕೋ ಅಥವಾ ಜ್ಞಾಪಿಸುವುದಕ್ಕೋ! ಏನೇ ಇರಲಿ, ನಮಗೆ ನವ ವಸಂತಕ್ಕೊಮ್ಮೆ ಕಡೆಯಪಕ್ಷ ಇಷ್ಟಾದರೂ ಜ್ಞಾಪಿಸುವಂತೆ ಮಾಡುವುದಕ್ಕೇ ಬಹುಷಃ ಯಾರೋ ದೂರಾಲೋಚಿಗಳು, ಈ ದಿನವನ್ನು ಮಾಡಿರಬಹುದು ಕಂಡು ಈ ಬೆಳೆಯುತ್ತಿರುವ ಜಾಗತಿಕ ಯಾಂತ್ರಿಕದ ಪಿಡುಗನ್ನು!
ಸಾರ್ವತ್ರಿಕ ತಾಯಿಂದಿರ ದಿನದ ಶುಭಾಶಯಗಳು( ಅಮ್ಮನಿಗೆ ತಿಳಿಸುತ್ತ) ಹೇಳುತ್ತಾ ನನ್ನ ಮಾತೃ ಪ್ರೇಮವನ್ನು ಈ ರೀತಿ ಅಭಿವ್ಯಕ್ತಪಡಿಸುತ್ತಿದ್ದೇನೆ....

                         ಮಾತೃವಿಗೆ ಮನದ ಮಾತು       
ಹಸುಳೆಯ ನಯನದ  ತೆರೆಯ ಘಮಿಸದ ಸುಮವರಳಿ ನಕ್ಕಾಗ
                          'ಜೈವಿಕ ದೈವಿಗೆ' ನಮಿಸುತ ನಲಿಯಿತು
ಶಿಶುವಿನ ಮೊಸೆಳೆಯ ಕಣ್ಣೀರಿಗೂ
                          ಕರಗಿತು ಆ ಕಾರ್ಮೋಡದ ಶಶಿಯ ಒಡಲು
ಕಂದನ ಕಿಡಿಗೇಡಿಯ ಕಿರಿಕಿರಿಗೂ
                          ಕ್ಷಮೆಯ ಕ್ಷೀರಭರಿತ ಕಡಲು
ಮಗುವಿನ ಮುಗ್ಧ ಮನದ ಮನೆಯ ಮಾಲಕಿಯೇ
                          ಶಯನಕೆ ಸೋಪಾನವೇ ಈ ಮಹದಾದ ಮಡಿಲು

- ಡಿ.ಗು.ರಾವ್..

Friday, April 30, 2010

ಕೈ ಮುಗಿದು ಒಳಗೆ ಬಾ........

ಹೊಸ ಬ್ಲಾಗ್ನಲ್ಲಿ ಸದಾ ಈ ನೆನಪು ಹಸಿರಾಗಿ ಇರಬೇಕೆಂದು ಒಂದು ಒಲವ ಕವಿತೆ ಬರೆದಿರುವೆ. ನಿಜ ಹೇಳಬೇಕಂದೆರೆ ಈ ಕವನಕ್ಕೆ ಜನ್ಮ ಕೊಟ್ಟಿದ್ದು ಒಂದು ಕಾಗದದ ಮೇಲೆ, ಅದು ಒಂದು ತಿಂಗಳ ಹಿಂದೆ. ಅಂದ ಹಾಗೆ ಈ ಕವಿತೆ ಬರೆಯುವ ಗೀಳು ಬಹುಕಾಲದಿಂದ ಉಳಿದುಕೊಂಡಿದೆ. ಬಹುಷಃ ಆರಂಭವಾದದ್ದು, ತರಗತಿಯು ನವ ವಸಂತಕ್ಕೆ ಕಾಲಿಟ್ಟಾಗ!
ಒಲವ ಕವಿತೆ ಎಂದಾಕ್ಷಣ ಪಡ್ಡೆ ಹುಡುಗರು ಕವಿಯಾಗಿಬಿಡುತ್ತಾರೆ ಎಂಬುದು ಸತ್ಯಕ್ಕೆ ದೂರವೇನಲ್ಲ! ಏನೇ ಇರಲಿ, ಈ ಪುಟ್ಟ ಕವನವೊಂದು ಆ ಭಾವನೆ ನಿಮಗೆ ಮೂಡಿಸದಿದ್ದಲ್ಲಿ ನಾನೊಬ್ಬ ಶಿಷ್ಯ ಕವಿಯಾಗುವುದರಲ್ಲಿ ಸಂದೇಹವಿಲ್ಲವೆನಿಸುತ್ತದೆ! ಇರಲಿ, ಈ ಮುಂದಿನ ಸಾಲುಗಳು ನನ್ನ ಮನದ ಕೇವಲ ಕಾಲ್ಪನಿಕ ಒಳ ಹೂರಣವನ್ನು ನಿಮಗೆ ಸ್ವಲ್ಪ ಉಣಬಡಿಸಲಿ!

                ಕೈ ಮುಗಿದು ಒಳಗೆ ಬಾ........ 


ಕೈ ಮುಗಿದು ಒಳಗೆ ಬಾ ಓ ಗೆಳತಿ,
                     ಭವ್ಯ ಪ್ರೇಮ ಮಂದಿರವಿದು!
ಮೈ ಮನಗಳ ರೋಮಂಚನಕೆ,
                     ನವ್ಯ ಹೂ ಹಂದರವಿದು!


ಹಸಿರುಟ್ಟು ನೀ ಬರುವಾಗ,
                    ಪ್ರಣಯ ದೀವಿಗೆ ಬೆಳುಗುತಿರಲಿ!
ನಿನ್ನ ಹೆಜ್ಜೆಯ ಗೆಜ್ಜೆ ಸವಿ ನಾದಕೆ,
                    ಜಗದ ಬೇಗೆಗಳೆಲ್ಲ ಈ ಮನದಿಂದ ತೊಲಗಲಿ!


ನಾಜೂಕಿನಿಂದ ನಸುನಾಚಿ ಒಳಗೆ ಬಾ ಓ ಗೆಳತಿ,
                    ಬಣ್ಣಬಣ್ಣದ ರಂಗವಲ್ಲಿ ಅಂಗಳದಿ ನಿನ್ನ ಸ್ವಾಗತಿಸಿದೆ!
ಹೊಸಿಲ ಪೂಜೆಯ ನೀ ಮಾಡಿ ಬಾ ಓ ಗೆಳತಿ,
                    ಹೊಸ ವ(ಹ)ರುಷ ನಮಗಾಗಿ ಕಾದಿದೆ!


ಬಲಗಾಲಿಟ್ಟು ಒಳಗೆ ಬಾ ಓ ಗೆಳತಿ,
                    ನಮಗಾಗಿ ಭಾಗ್ಯದ ಬಾಗಿಲು ತೆರೆದಿದೆ!
ನಂಬಿಕೆಯ ಕೈಯಿಂದ ಅನುಮಾನಗಳ ಬೀಗ ಒಡೆದು ಬಾ ಓ ಗೆಳತಿ,
                    ಸದಾ ಈ ದೇವತೆಯ ಆಗಮನಕೆ ಕಾದಿದೆ!


ಡಿ.ಗು.ರಾವ್

Wednesday, April 28, 2010

ಮುಖಪುಟ

ನಮಸ್ತೆ ಬ್ಲಾಗ್ಗೆ !
ಬ್ಲಾಗ್ನಲ್ಲಿ ಮೊದಲ ಸವಿ ತೊದಲ ನುಡಿ ಬರೆಯುವ ಸಂಧರ್ಭ ಒದಗಿ ಬಂದಿರುವುದು ನನ್ನ ಹಾಗು ಓದುಗರ ಪುಣ್ಯ !
"ಬರೆಯುವುದು ಆದರೆ ಕನ್ನಡದಲ್ಲೇ ಆಗಲಿ, ಅದು ಪುಸ್ತಕದಲ್ಲಾಗಲಿ ಇಲ್ಲವೇ ಇ-ಪುಸ್ತಕದಲ್ಲಾಗಲಿ" ಎಂಬ ಪುಟ್ಟ ಭಾಷಾಭಿಮಾನ ಮೆರೆಯುವ ಗುರಿ ನನ್ನ ಜೀವನದ ಒಂದು ಮೆಟ್ಟಿಲು!
 ಅಂತರ್ಜಾಲದ ಅಂತರಂಗದ ಶಕ್ತಿ ವೃದ್ಧಿಸಿತ್ತಿರುವುದಕ್ಕೆ ಅಸಂಖ್ಯಾತ ಉದಾಹರಣೆಗಳಿವೆ. ಬ್ಲಾಗ್ಗಳು ಅದರಲ್ಲಿ ಒಂದು ಚಿಕ್ಕ ಉದಾಹರಣೆ ಮಾತ್ರವಾದರೂ ಅತ್ಯುತ್ತಮವಾದವುಗಳಲ್ಲಿ ಒಂದು! 
ಬ್ಲಾಗ್ನಲ್ಲಿ ತೋರುವ ಎಲ್ಲಾ ಕನ್ನಡ ಶಬ್ದಗಳು ಗ್ರಾಂಥಿಕವಾಗಿ ಸರಿಯಾಗಿರುವುದನ್ನು ಕಂಡು ಕನ್ನಡ ಉಪಾಸಕರು ಹೃದಯದುಂಬಿ ಹರಸಲಿ! ಏಕೆಂದರೆ, ಇವುಗಳನ್ನು ಸೃಷ್ಟಿಸಲು ಪಡುವ ಹರಸಾಹಸ ನಮ್ಮಂಥ ಗಣತಂತ್ರ ವಿಜ್ಞಾನಿಗಳಿಗೆ ಮಾತ್ರ ಗೊತ್ತು!

ಮತೊಮ್ಮೆ ಧನ್ಯವಾದಗಳು ಬ್ಲಾಗ್ಗೆ,
ಡಿ.ಜಿ.ರಾವ್ (ಗುರುರಾಜ ರಾವ್ ದೇಸಾಯಿ)