Search This Blog

Tuesday, May 18, 2010

ಪ್ರಾರ್ಥನೆ

       'ಪ್ರೀತಿ'ಯ ಬಗ್ಗೆ ಏನೇ ಹೇಳ ಹೊರಟರೂ ಅದು ಹಳೆಯದೆನಿಸುವಷ್ಟು ವರ್ಣ ರಂಜಿತ ವ್ಯಾಖ್ಯಾನಗಳು, ವಿವರಣೆಗಳು ಮತ್ತು ವರ್ಣನೆಗಳು ಸಿಗುತ್ತವೆ! ಹೀಗಿರುವಾಗ ಹೇಳಲು ಹೊಸದಾದು ಏನೂ ಇಲ್ಲವೆಂದು, ಬರವಣಿಗೆಗೆ ಬರ ಬರಬಹುದೆಂದು ಒಂದು ಕ್ಷಣ ಎನಿಸಿದರೂ ಮರುಘಳಿಗೆ 'ಮನ'ವೆಂಬ ಮಾಯಾಜಾಲದ ಯಾವುದೋ ಮೂಲೆಯಿಂದ "ಒಲವು ಕವಿಗಳಿಗೆ ಕಲ್ಪವಾಗಿ, ಪ್ರೇಮಿಗಳಿಗೆ ಪ್ರೇರಣೆಯಾಗಿ, ಶಿಲ್ಪಿಗಳಿಗೆ ಶಿಲೆಯಾಗಿ ಒಟ್ಟಾರೆ ಅಕ್ಷಯವಾಗಿ ನಿತ್ಯ ನಿರಂತರ ನಿರ್ಮಲವಾದುದು" ಎಂಬ ಮಧುರಭಾವ ಸದಾ ಬುದ್ಧಿಯ ಕಿವಿಯಲ್ಲಿ ಗುನುಗುತ್ತಿರುತ್ತದೆ!
       ಆ ನಿಟ್ಟಿನಲ್ಲಿ ನನ್ನ ಈ ಮುಂದಿನ ಸಾಲುಗಳು ಯಾವ ಕಥಾವಸ್ತುವನ್ನಾಧರಿಸಿರುತ್ತದೆ ಎಂಬುದನ್ನು ಜಗಜ್ಜಾಹೀರುಗೊಳಿಸಿ ನಿಮ್ಮ ಮುಂದೆ ಅಥವಾ ಎದುರಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಅಂದಹಾಗೆ ಈ ಸಾಲುಗಳು ಸಹ ಹೊಸತಿನ ಮುಖವಾಡ ಧರಿಸಿ, ಅದೇ ಪ್ರೇಮ ಪುರಾಣದ ಕಲಸು ಮೇಲೋಗರವಾಗಿದೆ!

                                  ಪ್ರಾರ್ಥನೆ 

ಅನುರಾಗಕೆ ಅನುವು ಕೊಟ್ಟರೆ
                   ಮನದಲಿ ನಾ ಮನೆಯ ಮಾಡುವೆ
ಕೋಗಿಲೆಯೇ ನಿನ್ನ ಇಂಪಾದ ದನಿ ಕೊಟ್ಟರೆ 
                   ಸವಿ ಹಾಡಿನಲೇ ನಿನ್ನ ಮಾತನಾಡಿಸುವೆ

ಹೆಸರಿರದ ಹೊಸ ಬಂಧವೊಂದು 
                  ಎದೆಯಲಿ ಹಸಿರಾಗಿ ಹಬ್ಬಿದೆ
ಹೆಸರಿನಿಂದ ನಿನ್ನ ಜಪ ಮಾತ್ರಕೆ 
                  ಆನಂದದಲಿ ನವಿರಾಗಿ ನನ್ನೆದೆ ಉಬ್ಬಿದೆ

ಪ್ರೇಮಪೂಜೆಗೆ ನೀ ಒಳ ಹೋದಾಗ
                 ನಾನಾಗಿರುವೆ ಬಾಗಿಲ ಮುಂದಿನ ತಿರುಕ!
ಈ ದಯನೀಯ ಸ್ಥಿತಿಯ ಕಂಡು
                 ನೀ ಒಮ್ಮೆ ಪಟ್ಟರೆ ಸಾಕು ಮರುಕ

ಈ ಆಳ ಒಲವ ಸಾಗರವ 
                ನೀ ಹಿಡಿಮುಷ್ಟಿಯಲಿ ತುಂಬಿಟ್ಟ ಬಗೆ ತಿಳಿಸು
ದುರುಳ ನೆನಪಿನ ಆಳ ಕಹಿಯಲಿ ತೋರಿ ಈ ಮುದ್ದು ಮುಖವ
                ದಯಮಾಡಿ ಈ ಬಡ ಉಸಿರ ಉಳಿಸು
ನಿಮ್ಮ 
    ಡಿ.ಗು.ರಾವ್ 





1 comment: